ಪಕ್ಷಿಗಳ ಜೀವನ ಶೈಲಿಯನ್ನು ನೋಡಿದ್ದೇವೆ. ಬಹುತೇಕ ಪಕ್ಷಿಗಳು ಸಾಮಾನ್ಯವಾಗಿ ಮರದ ಪೊಟರೆಯಲ್ಲಿ, ಮರದ ಕೊಂಬೆಗಳಲ್ಲಿ ಅಥವಾ ಕಟ್ಟಡದ ಚಾವಣಿಗಳಲ್ಲಿ ವಾಸಿಸುತ್ತವೆ. ಆದರೆ ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ವಿಧ ವಿಧ ಬಗೆಯ ಗೂಡನ್ನು ಕಟ್ಟುತ್ತವೆ. ಆ ಗೂಡಿನಲ್ಲೇ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತವೆ. ಅವುಗಳಿಗೆ ಗುಟುಕು ನೀಡಿ ಬೆಳೆಸುತ್ತವೆ. ಮರಿಗಳ ರೆಕ್ಕೆ ಬಲಿತು ಹಾರಲು ಕಲಿತ ನಂತರ ಅವುಗಳನ್ನು ತಮ್ಮ ಪಾಡಿಗೆ ಸ್ವಂತ ಶಕ್ತಿಯಿಂದ ಬದುಕಲಿ ಎಂದು ಬಿಟ್ಟು ತೆರಳುತ್ತವೆ. ಪಕ್ಷಿಗೂ ಮಾತೃ ವಾತ್ಸಲ್ಯವಿತ್ತು, ಜವಾಬ್ದಾರಿಯಿತ್ತು. ಅದಕ್ಕಾಗಿಯೇ ತಾನು ಹೇಗಿದ್ದರೂ ಸರಿ ಮರಿಗಳು ಬೆಚ್ಚಗಿರಬೇಕೆಂದು ಕಷ್ಟಪಟ್ಟು ಗೂಡನ್ನು ಕಟ್ಟಿತ್ತು.ಮರಿಗಳಿಗೆ ತಮ್ಮಿಚ್ಚೆಯಂತೆ ಬದುಕುವ ಸ್ವಾತಂತ್ರ್ಯವನ್ನು ನೀಡಿ ಮುಕ್ತಗೊಳಿಸಿತು....
ಆದರೆ ಮನುಷ್ಯರಾದ ನಾವು ಮಕ್ಕಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದು ಹೇಗೆ.ನಡೆಯಲು ಕಲಿತಿರುವ ಮಕ್ಕಳನ್ನೂ ಕೈಹಿಡಿದುಕೊಂಡೆ ಸಾಗುತ್ತಿದ್ದೇವೆ. ಕುಂತಲ್ಲಿ ನಿಂತಲ್ಲಿ ಮಕ್ಕಳ ಬಗ್ಗೆಯೇ ಚಿಂತಿಸಿ ನಾವು ಮನೋರೋಗಿಗಳಾಗುತ್ತಿದ್ದೇವೆ. ನಾವು ದುಡಿಯುವ ಪ್ರತಿ ಕಾಸಿನ ಮೇಲೂ ಮಕ್ಕಳ ಹೆಸರನ್ನೇ ಕೆತ್ತುತ್ತಿದ್ದೇವೆ. ಅದ್ಯಾವ ಪರಿ ಎಂದರೆ ನಾವು ರುಚಿಸುವುದನ್ನು ತಿನ್ನದೆ, ಶೋಕಿ ಬಟ್ಟೆ ತೊಡದೆ, ಯಾವ ಸುಖವನ್ನು ಅನುಭವಿಸದೆ ಸರ್ವವನ್ನು ಮಕ್ಕಳಿಗೆಂದೇ ಮೀಸಲಿಡುತ್ತಿದ್ದೇವೆ. ಸಮಾಜದಲ್ಲಿ ಕೆಟ್ಟ ಹೆಸರು ಸಂಪಾದಿಸಿಯೋ ಅಥವಾ ಸ್ವಂತ ಪರಿಶ್ರಮದ ಮೂಲಕವೋ ದುಡಿದ ಹಣ, ಆಸ್ತಿ, ಅಂತಸ್ತುಗಳನ್ನು ಅವರಿಗೆಂದೇ ಕೂಡಿಡುತ್ತಿದ್ದೇವೆ. ಒಂದು ಲೆಕ್ಕದಲ್ಲಿ ಪ್ರಾಣಿಗಳೇ ನಮಗಿಂತ ಮೇಲು. ಯಾವ ಹುಲಿಯೂ ತನ್ನ ಮರಿಗಳಿಗಾಗಿ ಜಿಂಕೆಯ ಫಾರ್ಮ್ ಮಾಡಿಟ್ಟು ಹೋಗುವುದಿಲ್ಲ, ಕೇವಲ ಬೇಟೆಯಾಡಿ ಬದುಕುವುದ್ದನ್ನಷ್ಟೇ ಕಲಿಸಿರುತ್ತದೆ. ಯಾವ ಪಕ್ಷಿಯೂ ತನ್ನ ಮರಿಗಳಿಗೆ ಕಾಳುಗಳ ಭಂಡಾರವನ್ನು ನಿರ್ಮಿಸಿ ಹೋಗುವುದಿಲ್ಲ, ಹುಡುಕಿ ಹೆಕ್ಕಿ ತಿನ್ನುವುದನ್ನು ಮಾತ್ರ ಕಲಿಸಿರುತ್ತದೆ.
ಇನ್ನು ಮಕ್ಕಳಿಗಾಗಿ ಅದೆಷ್ಟು ಸಂಬಂಧಗಳನ್ನು ಮುರಿದುಕೊಂಡಿದ್ದೇವೆಂದರೆ ಲೆಕ್ಕವಿಲ್ಲ. ಮಕ್ಕಳನ್ನು ಓದಿಸುವ ಕುಂಟುನೆಪ ಇಟ್ಟುಕೊಂಡು ಹಳ್ಳಿಯನ್ನು, ಹುಟ್ಟಿಬೆಳೆದ ಮನೆಯನ್ನು,ಸಂಬಂಧಿಕರನ್ನು, ನಮಗಾಗಿ ಜೀವ ತೆಯ್ದ ಹೆತ್ತವರನ್ನು ಬಿಟ್ಟು ಬಂದವರು ಮತ್ತೆ ಮಕ್ಕಳ ಮದುವೆಯಾದರೂ ಅತ್ತ ತಿರುಗಿ ನೋಡಿದ್ದಿಲ್ಲ.....
ನಮ್ಮ ಮಕ್ಕಳನ್ನು ಅದೆಷ್ಟು ಹಚ್ಚಿಕೊಂಡಿದ್ದೇವೆಂದರೆ ಅವರ ಚಿಕ್ಕಚಿಕ್ಕ ವಿಷಯಗಳಿಗಾಗಿ ಸ್ನೇಹಿತರು, ಒಡಹುಟ್ಟಿದವರು, ನೆರೆಹೊರೆಯವರ ಜೊತೆ ಜಗಳವಾಡಿದ್ದೇವೆ. ಮುನಿಸಿಕೊಂಡಿದ್ದೇವೆ. ಮತ್ತೆ ಸೇರಲಾರದಷ್ಟು ದೂರ ಹೋಗಿದ್ದೇವೆ. ಅದರ ಬದಲು ಮಕ್ಕಳಿಗೆ ಬುದ್ಧಿ ಹೇಳಿ ತಿದ್ದಿ ನಡೆಸಿ ಎಲ್ಲರ ಜೊತೆ ವಿಶಾಲ ಮನೋಭಾವ ತೋರಿದ್ದರೆ ಸಂಬಂಧಗಳು ಇನ್ನೂ ಗಟ್ಟಿಯಾಗುತ್ತಿದ್ದವು.
ಮಕ್ಕಳು ಸಾಗಬೇಕಾದ ದಾರಿತಪ್ಪಿದಾಗ ತಿದ್ದಬೇಕಾದ್ದು ನಮ್ಮ ಕೆಲಸ. ಆದರೆ ಅವರಿಗಾಗಿ ದಾರಿಯನ್ನೇ ನಿರ್ಮಿಸಲು ಹೊರಡುವುದು ಮೂರ್ಖತನ. ಅವರ ಭವಿಷ್ಯಕ್ಕಾಗಿ, ಸುಖಕ್ಕಾಗಿ ಒಂದಷ್ಟು ಗಳಿಸುವುದನ್ನು, ಉಳಿಸುವುದನ್ನು ಯಾರೂ ಬೇಡವೆನ್ನುವುದಿಲ್ಲ. ಆದರೆ ಇಡೀ ಬದುಕನ್ನೇ ಮಕ್ಕಳಿಗಾಗಿ ಮುಡಿಪಿಡುವಿದು ಮೂರ್ಖತನ
ಇನ್ನು ನಮಗೂ ಮಕ್ಕಳಿಗೂ ಇರುವ ಸಂಬಂಧವೂ ಅಷ್ಟೇ. ಎಲ್ಲರನ್ನೂ ನೋಯಿಸಿ, ನಾವೂ ನೊಂದು,ಸಾಕಿದ ಮಕ್ಕಳಿಂದ ಸಕರಾತ್ಮಕ ಫಲಿತಾಂಶವೇ ಸಿಗುತ್ತದೆ ಎನ್ನುವುದು ಸುಳ್ಳು. ನಾವು ಹೆತ್ತವರನ್ನು ಬಿಟ್ಟು ಮಕ್ಕಳಿಗಾಗಿ ಬದುಕಿದಂತೆ ಅವರೂ ಮುಂದೊಂದು ದಿನ ಪುನರಾವರ್ತಿಸುತ್ತಾರೆ. ಆಗ ಹಿಂದಿನ ತಪ್ಪುಗಳಿಗೆ ಪರಿತಪಿಸಿ ಪ್ರಯೋಜನವಿಲ್ಲ.
ಆಮೇಲೆ ಹಾದಿಬೀದಿಯಲ್ಲಿ ನಾವು ಅವರಿಗಾಗಿ ಮಾಡಿದ ತ್ಯಾಗಬಲಿದಾನಗಳನ್ನು ಹೇಳಿಕೊಂಡು ಹುಚ್ಚರಂತೆ ಅಲೆಯಬೇಕಾದೀತು. ನಗೆಪಾಟಲಿಗೀಡಾಗಬೇಕಾದೀತು. ಆದ್ದರಿಂದ ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಸುಸಂಸ್ಕೃತರನ್ನಾಗಿಸೋಣ. ದುಡಿದು ತಿನ್ನುವ, ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ತುಂಬಿಸೋಣ. ಎಲ್ಲರೂಳಗೊಂದಾಗು ಮಂಕುತಿಮ್ಮ ಎಂಬ ತತ್ವವನ್ನು ಕಲಿಸೋಣ. ನಾವೂ ಸಾಧ್ಯವಾದಷ್ಟು ನಮ್ಮ ದುಡಿಮೆಗನುಸಾರ ಸುಖವನ್ನೇ ಪಡೋಣ. ಮಕ್ಕಳಿಗಾಗಿ ಮಾಡಿ ಸತ್ತರೆ ಅವರ ಸುಖ ನೋಡಲು ನಾವಿರುವುದಿಲ್ಲ ಅಲ್ಲವೇ.
ಮಕ್ಕಳೇ ಸರ್ವಸ್ವವಲ್ಲ, ನಮ್ಮ ಜೀವನದ ಅತೀ ಮುಖ್ಯ ಭಾಗ ಅಷ್ಟೇ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ