========================
ಹಿರಿಯರಾದ ಶ್ರೀ ಕುಮಾರನಿಜಗುಣಸ್ವಾಮಿಗಳು ಮೊನ್ನೆ ಇಹಲೋಕವನ್ನು ತ್ಯಜಿಸಿದ್ದಾರೆ. ಇದು ಅವರು ಬಯಸಿದ ಕೈವಲ್ಯವೋ ಮೋಕ್ಷವೋ ಅಲ್ಲವೋ ತಿಳಿಯುವ ಯೋಗ್ಯತೆ ನಮಗಿಲ್ಲ. ಸನ್ಯಾಸಿಗಳು ಮೃತಿಯನ್ನೈದಿದಾಗ ಶೋಕಿಸಬಾರದೆಂಬ ಮಾತೂ ಇದೆ. ಆದರೆ ನಿತ್ಯಸಂಸಾರಿಗಳಾದ ನಮಗೆ ಅದರ ಗೊಡವೆಯೇಕೆ? ನಮ್ಮ ದುಃಖ ನಮ್ಮದು.
ಕುಮಾರನಿಜಗುಣರ ಬಗೆಗೆ ಹೆಚ್ಚು ಜನಕ್ಕೆ ತಿಳಿದಿರಲಾರದು - ಅವರು ಸಾಹಿತ್ಯಲೋಕದ, ವಿದ್ವಲ್ಲೋಕದ ಧ್ರುವತಾರೆಯಾಗಿ ತೊಳಗಲಿಲ್ಲ, ಸೂರ್ಯನಾಗಿ ಬೆಳಗಲಿಲ್ಲ - ಹಾಗೆ ತೊಳಗಿ ಬೆಳಗಲು ಬೇಕಾದ ವಿದ್ವತ್ತೆಯೂ, ಅದನ್ನು ಮಿಂಚಿದ ಪ್ರತಿಭೆಯೂ ಅವರ ಬಳಿ ಬೇಕಾದಷ್ಟಿತ್ತೆಂಬುದನ್ನು ಅವರನ್ನು ವಿದ್ವದೃಷ್ಟಿಯಿಂದ ಕಂಡವರು ಬಲ್ಲರು - ಬಲ್ಲವರು ಹಲವಷ್ಟು ಬರೆದಿದ್ದಾರೆ ಕೂಡ. ಅದರಲ್ಲಿ ನಾನು ಕಂಡುದು ಅತ್ಯಲ್ಪವೆಂದರೆ ಅದಕ್ಕೆ ಕಾರಣ ಆ ವಿದ್ವತ್ಪ್ರತಿಭೆಯನ್ನು ಸ್ವಾಮಿಗಳು ಧರಿಸಿದ್ದ ರೀತಿ - ಆ ವಿದ್ವತ್ತೆ ಮತ್ತು ಪ್ರತಿಭೆಗಳ ಭಾರವು ತಮ್ಮದಲ್ಲವೆಂಬಂತೆ ಅವಲೀಲೆಯಾಗಿ ಹೊತ್ತು ಬದುಕಿದವರು ಕುಮಾರನಿಜಗುಣಸ್ವಾಮಿಗಳು. ಯಾವುದೇ ವೈಭವ, ಭಾಜಾಭಜಂತ್ರಿ, ತುತ್ತೂರಿಗಳಿಲ್ಲದೇ, ಜಾತಿ-ರಾಜಕೀಯಗಳ ಹೋರಟೆಯಿಲ್ಲದೇ ಚಿಲಕವಾಡಿಯ ಬೆಟ್ಟದ ಗುಹೆಯ ಪ್ರಸನ್ನತೆಯಲ್ಲಿ, ಗುರು ನಿಜಗುಣರ ಸಾನ್ನಿಧ್ಯದಲ್ಲಿ, ಕೇವಲ ಕಾಡುಹೂವಿನಂತೆ ಬದುಕಿ ಮರೆಯಾದರು. ರಾಜರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿದಲ್ಲದೇ, ಕಾಡುಹೊಕ್ಕಲ್ಲದೇ ವನಸುಮದ ಗಂಧ ಅರಿವಿಗೆ ಬಾರದಷ್ಟೇ? ಹೀಗಾಗಿ ಅನೇಕರಿಗೆ ಅಜ್ಞಾತರಾಗಿಯೇ ಉಳಿದರು ಸ್ವಾಮಿಗಳು, ಅದು ಅವರು ಬಯಸಿ ಆರಿಸಿಕೊಂಡ ಬದುಕು. ಅದನ್ನು ಆಗೀಗಾದರೂ ಹತ್ತಿರದಿಂದ ಕಂಡು ಆಘ್ರಾಣಿಸಿದವರು ಭಾಗ್ಯಶಾಲಿಗಳು - ಆ ಭಾಗ್ಯದ ಕಿಂಚಿತ್ಪ್ರಮಾಣವು ನನ್ನದೂ ಕೂಡ.
ಅವರ ಪರಿಚಯವಿರುವ ಬಹುಮಂದಿಗೆ ಕುಮಾರ ನಿಜಗುಣಸ್ವಾಮಿಗಳೆಂದರೆ ಮೊಟ್ಟಮೊದಲು ಮನಸ್ಸಿಗೆ ಬರುವುದು ಅವರ ಅಗಾಧ ವಿದ್ವತ್ಕೃಷಿಯಲ್ಲ, ಅವರ "ಬೋಳು ಬಸವನ ಬೊಂತೆ". ಪೂಜ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳುಮುನಿಯನ ಕಗ್ಗಗಳಂತೆಯೇ ಇದೂ ಒಂದು ಬಿಡಿಚೌಪದಿಗಳ ಗುಚ್ಚ. ಶೈಲಿವಿನ್ಯಾಸಗಳಲ್ಲಿ ಅದರ ಅನುಕರಣೆಯಂತೆ ತೋರಿ ಬಂದರೂ ಹೂರಣದಲ್ಲಿ ಇದು ಅವರದೇ ಜೀವನಾನುಭವದ, ಅನುಭಾವದ ರಸಗಟ್ಟಿ, ಬದುಕಿನ ಪ್ರಾಮಾಣಿಕ ಕಾಣ್ಕೆ. ಅದರಂತೆ ಇದೂ ಬದುಕಿನ ದುರ್ಭರಸನ್ನಿವೇಶಗಳಲ್ಲಿ ನನ್ನ ಕೈಹಿಡಿದು ನಡೆಸಿದೆ. ಈ ಕೃಪೆಗಾಗಿ ಸ್ವಾಮಿಗಳು ನನಗೆ ವಿಶೇಷವಾಗಿ ಪ್ರಾತಃಸ್ಮರಣೀಯರು. ಬೋಳು ಬಸವನ ಬೊಂತೆಯಲ್ಲಿ ಒಂದು ಪದ್ಯವಿದೆ:
ಮಕ್ಕಳಿಲ್ಲದವರಿಗೆ ಮುಕ್ತಿ ದುರ್ಲಭವೆಂದು
ಉಕ್ಕಿಪರು ದುಃಖಮಂ ಹೆಗ್ಗ ಜನರು
ಮಕ್ಕಳಾಗದೆಯಲ್ತು ಮಕ್ಕಳಂತಾಗದಿರೆ
ದಕ್ಕದೈ ಮೋಕ್ಷಸುಖ ಬೋಳುಬಸವ.
ಇದಕ್ಕೆ ಲಕ್ಷ್ಯವಾಗಿ ಬದುಕಿದವರು ಸ್ವಾಮಿಗಳು. ಮಗುವಿನ ಮಂದಹಾಸ, ಮಗುವಿನ ಮುಗ್ಧತೆ, ಮಗುವಿನದೇ ಸ್ನೇಹಪರತೆ, ಮಗುವಿನದೇ ಸರಳತೆ, ಮಗುವಿನದೇ ಶೀಘ್ರಕೋಪವೂ (ಈ ಕೊನೆಯ ಗುಣದ ಪರಿಚಯ ನನಗಾಗಿಲ್ಲ ಆದರೆ ಅದನ್ನು ಅನುಭವಿಸಿದವರು ಹಲವರು ಅದಕ್ಕೆ ಸಾಕ್ಷಿ ನುಡಿಯಬಲ್ಲರು). ಆದರೆ ಇವೆಲ್ಲವೂ ಅವರಲ್ಲಿ ಶ್ರೀಮಂತವಾಗಿ ನೆಲೆಗೊಂಡಿದ್ದ ಭಾವಪ್ರಾಮಾಣಿಕತೆಯಿಂದ ಹೊಮ್ಮಿದ್ದೆನ್ನುವುದರಲ್ಲಿ ಸಂಶಯವಿಲ್ಲ - ಸಂತಸವಾಗಲಿ, ಸ್ನೇಹವಾಗಲಿ, ಮಂದಹಾಸವಾಗಲಿ, ಕೊನೆಗೆ ಆ ಕ್ಷಣಕ್ಕೆ ಉರವಣಿಸಿ ಮರೆಯಾಗುವ ಕೋಪವಾಗಲಿ ಪ್ರಾಮಾಣಿಕವಾದದ್ದು, ಕಪಟವರಿಯದ್ದು, ಪರಿಶುದ್ಧವಾದದ್ದು. ಹೀಗಿರುವುದೂ ಸುಲಭವೇನಲ್ಲ.
ಕುಮಾರನಿಜಗುಣರ ಪರೋಕ್ಷ ಪರಿಚಯ ನನಗಾದದ್ದು ಅದೇ ಬೋಳುಬಸವನ ಬೊಂತೆಯಿಂದಲೇ. ನಮ್ಮ ತಂದೆಯವರ ಸಂಗ್ರಹದಲ್ಲಿತ್ತು. ಆಗ ನನಗೆ ಹತ್ತೋ ಹನ್ನೊಂದೋ. ಆಗಿನ್ನೂ ಅವರು ಸ್ವಾಮಿಗಳಾಗಿರಲಿಲ್ಲ, ಲಾಯರ್ ಪಿ ಬಸವಣ್ಣನವರಾಗಿದ್ದರು. ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ನಡೆಯುತ್ತಿದ್ದ 'ಟೀಚರ್ಸ್ ಮೀಟಿಂಗ್'ನಲ್ಲಿ ಕೆಲವೊಮ್ಮೆ ಭಾಷಣಕಾರರಾಗಿ ಶ್ರೀ ಬಸವಣ್ಣನವರನ್ನು ವಿದ್ಯಾ ಇಲಾಖೆ ಕರೆಸುತ್ತಿತ್ತೆಂದು, ಶಿಕ್ಷಕರಾಗಿದ್ದ ನಮ್ಮ ತಂದೆ ಹೇಳಿದ್ದ ನೆನಪು. ಇಂತಹ ಮೀಟಿಂಗೊಂದರಲ್ಲಿ ಬಸವಣ್ಣನವರು ಆಗಷ್ಟೇ ಪ್ರಕಟವಾಗಿದ್ದ ತಮ್ಮ ಬೋಳುಬಸವನ ಬೊಂತೆಯನ್ನು ಶಿಕ್ಷಕರಿಗೆ ಹಂಚಿದ್ದರೆಂದು ನೆನಪು. ನಮ್ಮ ಮನೆಗೆ ಬೊಂತೆ ಬಂದದ್ದು ಹೀಗೆ. ಸಾಮಾನ್ಯವಾಗಿ ನಮ್ಮ ತಂದೆಯವರ ಸಂಗ್ರಹದಲ್ಲಿದ್ದ ಪುಸ್ತಕವನ್ನೆಲ್ಲಾ ನಾನು ಅದೊಂದು ರೀತಿ ನಿಸ್ಪೃಹತೆಯಿಂದ ಓದುತ್ತಿದ್ದೆ - ಓದಬೇಕೆಂಬ ಕುತೂಹಲವಿಲ್ಲ, ಜ್ಞಾನವೃದ್ಧಿಯೋ ಮತ್ತೊಂದೋ ಉದ್ದೇಶವೂ ಇಲ್ಲ - ಸುಮ್ಮನೇ ಓದುವ ಹವ್ಯಾಸವಷ್ಟೇ. ಅದೇ ನಿಸ್ಪೃಹತೆಯಿಂದಲೇ ಮಂಕುತಿಮ್ಮನ ಕಗ್ಗವನ್ನೂ ಓದಿದ್ದು, ಅದೇ ರೀತಿ ಬೋಳುಬಸವನ ಬೊಂತೆಯನ್ನೂ. ಹೀಗೆ ಲಾಯರ್ ಬಸವಣ್ಣ ಮತ್ತು ಬೋಳುಬಸವನ ಬೊಂತೆ ಇವೆರಡೂ ಪರ್ಯಾಯನಾಮಗಳಾಗಿ ನನ್ನ ಸ್ಮೃತಿಕೋಶದಲ್ಲಿತ್ತು. ಅದು ಬಿಟ್ಟರೆ ನಮ್ಮ ಪಾಲಿಗೆ, ಕೊಳ್ಳೇಗಾಲದಲ್ಲಿ ಆ ಕಾಲಕ್ಕೆ ಖ್ಯಾತನಾಮರಾಗಿದ್ದ ನಾಲ್ಕೋ ಐದೋ ಜನ ಲಾಯರುಗಳಲ್ಲಿ ಪಿ ಬಸವಣ್ಣನವರದ್ದೂ ಒಂದು ಹೆಸರು - ನೇರ ಪರಿಚಯವಿಲ್ಲ - ಕಾನೂನೆಂಬ ಒಂದು ಪ್ರಾಣಿ ಇದೆಯೆಂಬುದನ್ನೂ ಅರಿಯದ ಸರಳಜೀವನಕ್ಕೆ ಲಾಯರುಗಳ ಪ್ರವೇಶ ತಾನೇ ಹೇಗೆ ಸಾಧ್ಯ.
ಬಸವಣ್ಣನವರನ್ನು ಅಲ್ಲಿಲ್ಲಿ ಪೇಟೆಬೀದಿ ಮೊದಲಾದ ಕಡೆ ಸುಮ್ಮನೇ ಕಂಡಿದ್ದೆನಾದರೂ ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದು ಒಂದು ತಮಾಷೆಯ ಸಂದರ್ಭದಲ್ಲಿ. ನಮ್ಮೂರಿನಲ್ಲಿ ಇನ್ನೊಬ್ಬರು ಹೆಸರಾಂತ ಲಾಯರಿದ್ದರು. ಶೇಷಾದ್ರಿ ಅಯ್ಯಂಗಾರರೆಂದೋ ಏನೋ ಅವರ ಹೆಸರು. ಅವರಿಗೂ ನನಗೂ ಸಂಬಂಧವುಂಟಾದದ್ದೂ ವೃತ್ತಿಯ ಕಾರಣದಿಂದಲ್ಲ, ನಮ್ಮೂರ ಆಂಜನೇಯನ ಕಾರಣದಿಂದ. 10-11 ವರ್ಷದವನಾದ ನನಗೂ ಪ್ರತಿಷ್ಠಿತ ವಕೀಲರಾಗಿದ್ದ, ಆಗ್ಗೆ ಸುಮಾರು ಐವತ್ತು ಮೀರಿರಬಹುದಿದ್ದ ಅಯ್ಯಂಗಾರರಿಗೂ ಇದ್ದ ಸಮಾನಧರ್ಮ ಈ ಹನುಮದ್ಭಕ್ತಿಯೇ. ಆ ಪರಿಚಯದಿಂದಲೇ ಅವರ ಮಡದಿಮಕ್ಕಳೊಂದಿಗೂ ಪರಿಚಯ. ದೊಡ್ಡ ಮನೆ, ಹೊರಗೆ ಅದಕ್ಕಿಂತ ದೊಡ್ಡದಾದ ಸುಮಾರು ನಲವತ್ತೋ ಐವತ್ತೋ ಅಡಿ ವಿಸ್ತೀರ್ಣವುಳ್ಳ ಅಂಗಳ. ಜಗುಲಿಯ ಮೇಲೇ ಲಾಯರರ ಆಫೀಸು - ಕಕ್ಷಿದಾರರನ್ನು, ವೃತ್ತಿಬಾಂಧವರನ್ನು ಅವರು ಭೇಟಿಯಾಗುತ್ತಿದ್ದುದು ಅಲ್ಲೇ. ಅವರ ಮನೆಯಲ್ಲಿ ಒಂದು ಅಲ್ಸೇಷನ್ ನಾಯಿಯಿತ್ತು. ಒಳ್ಳೆ ಸಿಂಹದಂತಿತ್ತು. ರಿಂಕಿ ಎಂದು ಅದರ ಹೆಸರು. ಕೆಲಕಾಲದ ಬಳಕೆಯಿಂದ ಅದರ ಭಯವನ್ನು ಮೆಟ್ಟಿದ್ದೆನಾದರೂ ಅದರೊಡನೆ ಎಂದೂ ಸಲುಗೆ ಬೆಳೆಯಲಿಲ್ಲ. ಅದೂ ನನ್ನನ್ನು ಹೆಚ್ಚೇನು ಕಾಡದೇ ಇವನೇನೋ ಪಾಪದ ಪ್ರಾಣಿಯೆಂದು ನನ್ನನ್ನು ಕ್ಷಮಿಸಿ ಸುಮ್ಮನಾದಂತಿತ್ತು. ನಾನು ಅಪರೂಪಕ್ಕೆ ಅವರ ಮನೆಗೆ ಹೋದರೆ ಬೊಗಳದೇ ಬಾಲವನ್ನೂ ಆಡಿಸದೇ ನಾನು ಕಾಣಲೇ ಇಲ್ಲವೆಂಬಂತೆ ಸುಮ್ಮನಿರುತ್ತಿತ್ತು. ನಾನೂ ಅಷ್ಟೇ, ದುಷ್ಟರನ್ನು ಕಂಡರೆ ದೂರವಿರು ಎಂಬ ಗಾದೆಯಂತೆ ನನ್ನಷ್ಟಕ್ಕೆ ನಾನಿರುತ್ತಿದ್ದೆ. ಮನೆಗೆ ಹೋದಾಗ ಮಾಮಿ (ಅಯ್ಯಂಗಾರ್ ಲಾಯರರ ಮಡದಿ) ಏನಾದರೂ ತಿಂಡಿ ಕೊಡುತ್ತಿದ್ದರು - ತಿನ್ನುತ್ತಾ ಅವರ ಮಕ್ಕಳೊಡನೆ ಹರಟುತ್ತಾ ಜಗುಲಿಯ ಮೇಲೆ ಕೂರುವುದು ವಾಡಿಕೆ.
ಇಂಥದ್ದೊಂದು ಸಂಜೆ, ಅಂಗಳದಲ್ಲಿ ಗೇಟಿನ ಬಳಿ ಎಂಥದೋ ಭಾರೀ ಕೋಲಾಹಲ. ರಿಂಕಿ ಯಾರನ್ನೋ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಹಿಡಿದೇ ಬಿಟ್ಟು ವರವರಗುಟ್ಟುತ್ತಿದೆ. ನೋಡಿದರೆ ದಾಳಿಗೊಳಗಾಗಿದ್ದವರು ಮತ್ತಾರೂ ಅಲ್ಲ, ಲಾಯರ್ ಬಸವಣ್ಣನವರು. ಎತ್ತರದ ನಿಲುವು, ಕಪ್ಪೆಂದರೆ ಕಡುಗಪ್ಪು ಗಡ್ಡ, ಒಪ್ಪವಾಗಿ ಹಿಂದಕ್ಕೆ ಬಾಚಿ ಗಂಟು ಕಟ್ಟಿದ್ದ ಕಪ್ಪು ಕೂದಲು, ಕೃಷ್ಣವರ್ಣದ ಮುಖದ ಮೇಲೆ ಅಚ್ಚಾಗಿ ಬಳಿದ ಅಚ್ಚ ಬಿಳಿಯ ವಿಭೂತಿ, ಅದರ ಕೆಳಗೆ ಹೊಳೆಹೊಳೆವ ಕಣ್ಣುಗಳು, ಹುಡುಕಿದರೂ ಕಪ್ಪು ಚುಕ್ಕೆಯೊಂದು ಕಾಣದ ಬಿಳಿಯ ದಟ್ಟಿ ಪಂಚೆ, ಅದರಮೇಲೊಂದು ಅಚ್ಚಬಿಳಿಯ ಒರಟು ಖಾದಿಯ ಕಸೆಯಂಗಿ, ಬಗಲಲ್ಲಿ ಚರ್ಮದ್ದೋ ಬಟ್ಟೆಯದೋ ಕಪ್ಪು ಚೀಲ. ಕಪ್ಪು ನಾಯಿ ಪಕ್ಕನೆ ಬಾಯಿ ಹಾಕಿ ಹಿಡಿದದ್ದು ಈ ಕಪ್ಪು ಚೀಲವನ್ನೇ. ಹೇಗಾದರೂ ಅನುನಯದಿಂದ ಅದನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಬಸವಣ್ಣನವರು. ನಾಯಿಯ ಗಲಭೆ, ನಮ್ಮ ಗಲಭೆ ಇವನ್ನೆಲ್ಲಾ ಕೇಳಿ ಮನೆಯೊಳಗಿಂದ ಓಡಿ ಬಂದ ಲಾಯರು "Hey Rinky, don't you do that... say sorry" ಎಂದು ಕೂಗಿದ ಮೇಲೆಯೇ ರಿಂಕಿ ಬಸವಣ್ಣನವರನ್ನು ಬಿಟ್ಟಿದ್ದು, ಮತ್ತು "ಸಾರಿ"ಯಾಗಿ ಬಾಲವಾಡಿಸತೊಡಗಿದ್ದು. ಹೇಗೋ ಸಾವರಿಸಿಕೊಳ್ಳುತ್ತಾ, "ಹಹ್ಹಾ... ಪಾಪ ಫ್ರೆಂಡ್ ಮಾಡಿಕೊಳ್ಳೋಕ್ಕೆ ಪ್ರಯತ್ನ ಪಡ್ತಾ ಇದ್ಲು" ಎಂದು ನಗುನಗುತ್ತಾ ಬಸವಣ್ಣನವರು ಒಳಬಂದರು. ಇದೊಂದು ನೆನಪು.
ಮತ್ತೊಮ್ಮೆ ಅವರು ನನ್ನ ಗಮನಕ್ಕೆ ಬಂದದ್ದು ನಮ್ಮೂರಿನಲ್ಲಿ 1986ರಲ್ಲೋ 87ರಲ್ಲೋ ನಡೆದ ಅವಧಾನಕಾರ್ಯಕ್ರಮದಲ್ಲಿ - ಶತಾವಧಾನಿ ಆರ್ ಗಣೇಶರ (ಅವರಿನ್ನೂ ಆಗ ಶತಾವಧಾನಿಗಳಾಗಿರಲಿಲ್ಲವೆಂದು ನೆನಪು) ಅವಧಾನ. ನನಗಾಗ ಹದಿನಾರೋ ಹದಿನೇಳೋ. ಅದು ನಾನು ನೋಡಿದ ಮೊತ್ತಮೊದಲ ಅವಧಾನಕಾರ್ಯಕ್ರಮ. ಆಗಿನ್ನೂ ಅವಧಾನವೆಂಬುದು ನಮಗಿರಲಿ, ಕನ್ನಡಕ್ಕೇ ಹೊಸದು. ಕನ್ನಡದಲ್ಲಿ ಸಂಪೂರ್ಣ ಮರೆಯಾಗಿಬಿಟ್ಟಿದ್ದ ಅವಧಾನಕಲೆಯನ್ನು ಕನ್ನಡಕ್ಕೆ ಮರುಪರಿಚಯಿಸಿದ್ದೂ ಗಣೇಶರೇ, ಮೊದಲ ಅವಧಾನದಲ್ಲಿ ಅವರಿಗೆ ಹತ್ತೊಂಬತ್ತು ವರ್ಷವಂತೆ. ನಮ್ಮೂರಲ್ಲಿ ಅವಧಾನಕಾರ್ಯಕ್ರಮ ಮಾಡಿದಾಗ ಅವರು ಇಪ್ಪತ್ನಾಲ್ಕು ಇಪ್ಪತ್ತೈದರ ತರುಣ. ಅವಧಾನಕಲೆಯನ್ನವರು ಆರಂಭಿಸಿ ಐದಾರು ವರ್ಷಗಳು ಸಂದಿದ್ದೀತಷ್ಟೇ. ನಮಗೋ ಅವಧಾನದ ಬಗ್ಗೆ ವಿಚಿತ್ರ ಅದ್ಭುತಕಲ್ಪನೆಗಳು. ಯಾವ ಪದ್ಯ ಕೇಳಿದರೂ ಅಲ್ಲೇ ಹೇಳಿಬಿಡುತ್ತಾರಂತೆ, ಬೇಡವೆಂದ ಅಕ್ಷರ ಬಳಸದೇ ಅಲ್ಲೇ ಪದ್ಯ ಹೇಳುತ್ತಾರಂತೆ, ಗಂಟೆ ಹೊಡೆದದ್ದನ್ನೆಲ್ಲಾ ಲೆಕ್ಕವಿಟ್ಟುಕೊಂಡು ಕೊನೆಯಲ್ಲಿ ಹೇಳುತ್ತಾರಂತೆ (ಆಗ ಗಣೇಶರು ಘಂಟಾಗಣನವನ್ನೂ ಅವಧಾನದ ಭಾಗವಾಗಿ ಇಟ್ಟುಕೊಂಡಿದ್ದರು). ಕಿಕ್ಕಿರಿದ ಕಲಾಮಂಟಪ ಸಭಾಂಗಣದಲ್ಲಿ ಕೊನೆಯ ಮೂಲೆಯಲ್ಲಿ ನಿಂತು ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ ನೆನಪಿದೆ. ಅಲ್ಲಿ ಗಣೇಶರು ಕೇಸರೀಭಾತ್ ಎಂಬುದನ್ನು ಬಳಸಿ ಸಂಸ್ಕೃತ ಪದ್ಯವೊಂದನ್ನು ಮಾಡಿದ್ದರು. "ಕೇಸರೀಭಾತ್ ವಿಶಿಷ್ಯತೇ" (ಕೇಸರಿ = ಸಿಂಹ, ಇಭ=ಆನೆ) ಎಂದೇನೋ ಪೂರಣ ಮಾಡಿದ್ದು ನೆನಪಿದೆ. ಈ ಅವಧಾನದಲ್ಲಿ ಬಸವಣ್ಣನವರದು ನಿಷೇಧಾಕ್ಷರಪೃಚ್ಛಕಪಾತ್ರ. ಅವರು ಯಾವ ಪದ್ಯ ಕೇಳಿದರೋ ಹೇಳಿದರೋ ನೆನಪಿಲ್ಲ, ಆದರೆ ಒಂದು ಮಾತ್ರ ಅಚ್ಚಳಿಯದೇ ನೆನಪಿನಲ್ಲಿದೆ - ಅವಧಾನದಲ್ಲಿ ಅಪ್ರಸ್ತುತಪ್ರಸಂಗಿಗಳು ಕೇಳಿದ ಯಾವುದೋ ಪ್ರಶ್ನೆ, ಅದಕ್ಕೆ ಅವಧಾನಿಗಳು ಕೊಟ್ಟ ಉತ್ತರ ಇಡೀ ಸಭೆಯನ್ನು ನಗೆಗಡಲಲ್ಲಿ ಮುಳುಗಿಸಿತ್ತು. ಆಗ ಇದ್ದಕ್ಕಿದ್ದಂತೆ ಇಡೀ ಸಭೆಯ ನಗೆಯನ್ನು ಸೀಳಿಕೊಂಡು ಹಹ್ಹಹ್ಹಹ್ಹಹ್ಹಾ ಎಂಬ ಜೋರು ಅಟ್ಟಹಾಸ ವೇದಿಕೆಯ ಮೇಲಿಂದ ಕೇಳಿಬಂತು, ಧ್ವನಿವರ್ಧಕದ ಮೂಲಕ - ಎಸ್ ವಿ ರಂಗರಾವ್ ಘಟೋತ್ಕಚನ ಪಾತ್ರದಲ್ಲಿ ನಗುವ ರೀತಿ. ಯಾರು ನಗುತ್ತಿದ್ದಾರೆಂಬುದು ಕ್ಷಣಕಾಲ ತಿಳಿಯಲಿಲ್ಲ. ಆದರೆ ನಗು ನಿಲ್ಲುತ್ತಲೇ ಇಲ್ಲ. ನೋಡಿದರೆ, ಬಸವಣ್ಣನವರು. ನಗುತ್ತಿದ್ದಾರೆ, ಮೈಕ್ ಆಫ್ ಮಾಡುವುದನ್ನೂ, ಮೈಕನ್ನು ದೂರವೊಯ್ಯುವುದನ್ನೂ ಮರೆತು ಗಹಗಹಿಸಿ ನಗುತ್ತಿದ್ದಾರೆ. ಮತ್ತೊಮ್ಮೆ ಸಭೆ ನಗೆಯಲ್ಲಿ ಮುಳುಗಿತು. ನೀವು ಹೀಗೆ ಅಟ್ಟಹಾಸ ಮಾಡಿದರೆ ನಮ್ಮ ಗುಂಡಿಗೆಯ ಗತಿಯೇನು ಎಂದೋ ಏನೋ ಗಣೇಶರು ಚಟಾಕಿ ಹಾರಿಸಿದ್ದೂ ನೆನಪಿದೆ.
ಇದಾದ ಮೇಲೆ ಸುಮಾರು ಇಪ್ಪತ್ತೈದು ವರ್ಷ ಬಸವಣ್ಣನವರು ನನ್ನ ನೆನಪಿನಿಂದ ಆಚೆಗೆ ಸರಿದುಬಿಟ್ಟಿದ್ದರು - ನಮ್ಮೂರಿನ ಇತರ ಹಲವು ನೆನಪುಗಳಂತೆ. ಈ ನಡುವೆ ಒಂದೆರಡು ಬಾರಿ, ಬೋಳುಬಸವನ ಬೊಂತೆಯ ಲಾಯರ್ ಬಸವಣ್ಣನವರು ಸನ್ಯಾಸಿಗಳಾದರಂತೆ ಎಂಬ ಸುದ್ದಿ ಕೇಳಿದ್ದುಂಟು, ಅದೇನು ಅಷ್ಟೊಂದು ಕುತೂಹಲ ಕೆರಳಿಸುವ ಸಂಗತಿಯಾಗಿರಲಿಲ್ಲ. ಆಮೇಲೆ ಮತ್ತೆ ಅವರ ದರ್ಶನವಾಗಿದ್ದು 2012ರಲ್ಲಿ, ಮೈಸೂರಿನಲ್ಲಿ, ಇನ್ನೊಂದು ಅವಧಾನದಲ್ಲೇ! ವಿಶೇಷವೆಂದರೆ ಈ ಬಾರಿ ನಾನು ಪ್ರೇಕ್ಷಕನಾಗಿ ಅಲ್ಲ, ಅವರ ಪಕ್ಕದಲ್ಲೇ ಪೃಚ್ಛಕನಾಗಿ ಕುಳಿತು ಅವಧಾನದಲ್ಲಿ ಭಾಗವಹಿಸುವುದಿತ್ತು. ಈ ಇಪ್ಪತ್ತೈದು ವರ್ಷಗಳಲ್ಲಿ ಸಾಕಷ್ಟೇ ಆಗಿತ್ತು - ಭಾಷೆ-ಸಾಹಿತ್ಯಗಳಲ್ಲಿನ ನನ್ನ ಆಸಕ್ತಿಯ ಸ್ವರೂಪವೇ ಬದಲಾಗಿತ್ತು; ಹಳಗನ್ನಡದ ರುಚಿ ಬಹುವಾಗಿ ಬೆಳೆದಿತ್ತು, ನಿಬದ್ಧಪದ್ಯರಚನೆಯಲ್ಲೂ ಕೈ ಸುಮಾರಾಗಿ ಪಳಗಿತ್ತು - ಈ ಹೊಸ ರುಚಿಗಳೇ ಶತಾವಧಾನಿ ಶ್ರೀ ಗಣೇಶರ ಪರಿಚಯಭಾಗ್ಯವನ್ನೂ ತಂದುಕೊಟ್ಟಿತ್ತು. ವೈಯಕ್ತಿಕಜೀವನದಲ್ಲಿ, ನನ್ನ ಓದು ಮುಗಿದು, ಕೆಲಸಕ್ಕೆ ಸೇರಿ, ಸಂಸಾರವನ್ನೂ ಕಟ್ಟಿಕೊಂಡಿದ್ದೆ. ಇತ್ತ, ಲಾಯರ್ ಪಿ ಬಸವಣ್ಣನವರು ಆ ಉಪಾಧಿಯನ್ನು ತ್ಯಜಿಸಿ ಶ್ರೀ ಕುಮಾರ ನಿಜಗುಣಸ್ವಾಮಿಗಳಾಗಿದ್ದರು.
2012ರ ಒಂದು ಸಂಜೆ, ಹೇಗೂ ಬೆಂಗಳೂರಿಗೆ ಬಂದಿದ್ದುದರಿಂದ ಶ್ರೀ ಗಣೇಶರನ್ನೊಮ್ಮೆ ನೋಡಿ ಹೋಗೋಣವೆಂದು ಅವರ ಮನೆಗೆ ಹೋಗಿದ್ದೆ. ಅವರು ಯಾವುದೋ ಕಾರ್ಯಕ್ರಮವೊಂದಕ್ಕೆ ಹಾಜರಿ ಹಾಕಿ ಬರುವುದಿದ್ದುದರಿಂದ ನನ್ನನ್ನೂ ಜೊತೆಯಲ್ಲೇ ಕರೆದುಕೊಂಡು ಹೊರಟರು. ಮಾತಿನ ಮಧ್ಯೆ, ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯಲಿದ್ದ ತಮ್ಮ ಅವಧಾನವೊಂದರಲ್ಲಿ ಪೃಚ್ಛಕಪಾತ್ರವಹಿಸಲು ನನ್ನನ್ನು ಕೇಳಿದಾಗ ನನಗೆ ಆನಂದವೇನೋ ಆಯಿತು, ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವೂ ಅದನ್ನು ಮೀರಿದ ಗಾಬರಿಯೂ ಆಯಿತು. ಅವಧಾನದ ಬಗೆಗೆ ಇಪ್ಪತ್ತೈದು ವರ್ಷಗಳ ಹಿಂದಿದ್ದ ಬಾಲಿಶಕಲ್ಪನೆಗಳೇನೂ ಇಲ್ಲದಿದ್ದರೂ ಅದು ವಿದ್ವಾಂಸರ, ಸಾಹಿತ್ಯಪಟುಗಳ ಆಡುಂಬೊಲವೆಂಬ ಅರಿವಂತೂ ಇತ್ತು. ಅಷ್ಟೊಂದು ಜನ ವಿದ್ವಾಂಸರ ನಡುವೆ ನಾನು ಕುಳಿತು ವಿದ್ಯೆಯ ಪರ್ವತಕ್ಕೇ ಬಾಣ ಬಿಡುವ ಕಲ್ಪನೆ ನಿಜಕ್ಕೂ ನನಗೇ ನಗೆ ತರಿಸುವಂತಿತ್ತು. ಆದರೆ ಕಿರಿಯರನ್ನೂ ಎಳೆಯರನ್ನೂ ಮೇಲೆತ್ತಿ ಕೂರಿಸಿಕೊಳ್ಳುವ ಗಣೇಶರ ಸ್ನೇಹಬುದ್ಧಿ ನನಗೆ ಹೊಸದು. ಇರಲಿ, ಅದು ಬೇರೆಯದೇ ವಿಷಯವಾಯಿತು. ಅಂತೂ ಮೈಸೂರಿನ ಅವಧಾನದಲ್ಲಿ ನಾನು ಪೃಚ್ಛಕನಾಗಿ ಸಮಸ್ಯಾಪೂರಣದ ವಿಭಾಗವನ್ನು ನಿರ್ವಹಿಸುವುದೆಂದಾಯಿತು.
ಈ ಮೈಸೂರು ಅವಧಾನ ಕೆಲವು ಸಣ್ಣಪುಟ್ಟ ವಿಶೇಷಗಳನ್ನೊಳಗೊಂಡಿತ್ತು. ನಾನು ಭಾಗವಹಿಸಲಿದ್ದ ಮೊದಲ ಅವಧಾನಕಾರ್ಯಕ್ರಮ; ಮೈಸೂರು ಆಕಾಶವಾಣಿಯ ಬೆಳ್ಳಿಹಬ್ಬದ ನೆನಪಿಗಾಗಿ ನಿಲಯವು ಆಯೋಜಿಸಿದ ಕಾರ್ಯಕ್ರಮವಿದಾಗಿತ್ತು. ಹಿರಿಯವಿದ್ವಾಂಸರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಆಶಯಭಾಷಣ ಮಾಡುವವರಿದ್ದರು (ಆಗ್ಗೆ ಅವರ ಪರಿಚಯವೂ ನನಗಿರಲಿಲ್ಲ). ಮತ್ತಷ್ಟು ಹಿರಿಯ ವಿದ್ವಾಂಸರ ಪರಿಚಯವಾಗುವುದಿತ್ತು - ಎಲ್ಲಕ್ಕಿಂತ ಹೆಚ್ಚಾಗಿ ಕುಮಾರನಿಜಗುಣರ ಮರುಪರಿಚಯವಾಗುವುದೂ ಇತ್ತು. ನನಗೆ ಕುಮಾರನಿಜಗುಣರೂ ಒಳಗೊಂಡಂತೆ ಕಾರ್ಯಕ್ರಮದ ಪರಿಚಯಪತ್ರಿಕೆಯಲ್ಲಿದ್ದ ಯಾವ ವಿದ್ವಾಂಸರ ಮುಖಪರಿಚಯವೂ ಇಲ್ಲ. ನಿಜಗುಣ ಎಂಬ ಹೆಸರನ್ನು ನೋಡಿ ನಮ್ಮ ನಿಜಗುಣಶಿವಯೋಗಿಗಳ, ಕುಂತೂರು-ಚಿಲಕವಾಡಿಗಳ ನೆನಪಂತೂ ತುಂಬಿ ಬಂದಿತಷ್ಟೇ. ಇತ್ತ ಸ್ವಾಮಿಗಳಿಗೆ "ಕೊಳ್ಳೇಗಾಲ ಮಂಜುನಾಥ" ಎಂಬ ಹೆಸರನ್ನು ನೋಡಿ ಇದಾವುದು ಹೊಸಮುಖ ಎಂಬ ಕುತೂಹಲ. ಬಹುಶಃ ಅವರಿಗೆ ನನ್ನನ್ನು ಬಿಟ್ಟು ಅಂದು ಪೃಚ್ಛಕತ್ವವಹಿಸುವ ಎಲ್ಲ ವಿದ್ವಾಂಸರ ನಿಕಟಪರಿಚಯವಿತ್ತು. ಇವರನ್ನೊಮ್ಮೆ ಭೇಟಿಮಾಡಬೇಕಲ್ಲಾ, ನಮ್ಮೂರಿನವರು ಬೇರೆ, ನನಗೆ ಪರಿಚಯವೇ ಇಲ್ಲವಲ್ಲಾ - ಎಂದು ಗಣೇಶರಲ್ಲಿ ಹಳಹಳಿಸಿದರಂತೆ. ನಾನು ಕಾರ್ಯಕ್ರಮಕ್ಕೆ ಹೋದೊಡನೆ ಎದುರುಗೊಂಡ ಗಣೇಶರು, "ಕುಮಾರನಿಜಗುಣಸ್ವಾಮಿಗಳು ನಿಮ್ಮನ್ನು ನೋಡಬೇಕೆಂದು ಬಹುವಾಗಿ ಕಾದಿದ್ದಾರೆ, ಅವರೂ ನಿಮ್ಮೂರಿನವರೇ, ಪರಿಚಯ ಮಾಡಿಕೊಳ್ಳಿ" ಎಂದು ಹೇಳಿ ನನ್ನನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಹೋದರು. ಸ್ವಲ್ಪಕಾಲದ ಮೇಲೆ ಯಾರೋ ಸ್ವಾಮಿಗಳು ಬಂದರು, ಅವರನ್ನೂ ಗಣೇಶರು ಕರೆತಂದು ನನ್ನ ಪಕ್ಕದಲ್ಲಿ ಕುಳ್ಳಿರಿಸಿ ಇವರೇ ಕುಮಾರನಿಜಗುಣಸ್ವಾಮಿಗಳು, ನಿಮ್ಮೂರಿನವರೇ ಎಂದು ಪರಿಚಯ ಮಾಡಿಸಿದರು. ನೋಡಿದರೆ, ಇದು ನನಗೆ ಬಹುಪರಿಚಿತವಾದ ಮುಖವೇ, ಲಾಯರ್ ಬಸವಣ್ಣನವರು! ಅದೆಂತಹ ಬದಲಾವಣೆಯೋ - ಆ ಇಪ್ಪತ್ತೈದು ವರ್ಷದಲ್ಲಿ! ಕಣ್ಣು ಕೋರೈಸುವ ಶುಭ್ರಶ್ವೇತವಸನ ಮಾಸಲು ಕಾವಿ ಬಣ್ಣವಾಗಿದೆ, ಕಡುಗಪ್ಪು ಬಣ್ಣದ ಗಡ್ಡ ಬಹುವಾಗಿ ನೆರೆತು ಮಾಸಲು ಬಿಳಿಯ ಬಣ್ಣಕ್ಕೆ ತಿರುಗಿದೆ, ಆಜಾನುಬಾಹು ಶರೀರ ಕುಗ್ಗಿ ಕೃಶವಾಗಿದೆ, ಕಣ್ಣಿನ ಕಾಂತಿ, ಮುಗ್ಧಮಂದಹಾಸ ಮಾತ್ರ ಅದೇ - ಅವರೇ ಇವರು ಎಂಬುದಕ್ಕೆ ಸಾಕ್ಷಿ (ಭವಭೂತಿ ಹೇಳುತ್ತಾನಲ್ಲ, "ನಿವೇಶಃ ಶೈಲಾನಾಂ ತದಿದಮಿತಿ ಬುದ್ಧಿಂ ದ್ರಢಯತಿ")! ಸ್ವಾಮಿಗಳು ನನ್ನ ಪಕ್ಕ ಕುಳಿತುಕೊಳ್ಳುತ್ತಾ "ಶರಣು" ಎಂದರು. ಪರಿಚಯದ ಪ್ರತಿನಮಸ್ಕಾರ ಮಾಡಲೆಂದು ಮುಗಿಯಲಿದ್ದ ಕೈ ಅರ್ಧ ದಾರಿಯಲ್ಲೇ ತಡೆಯಿತು. ಪಕ್ಕ ಕುಳಿತವರು ಓರ್ವ ಸನ್ಯಾಸಿಯೆಂಬುದು ಪ್ರಜ್ಞೆಗೆ ಹೊಳೆದು ಕೂಡಲೇ ಎದ್ದು ನಿಂತೆ, ಸಂಪ್ರದಾಯದಂತೆ ನಮಸ್ಕರಿಸಿದೆ. ಅದಕ್ಕೆ ಮತ್ತೆರಡು ಬಾರಿ ಶರಣುಶರಣು ಎಂದ ಸ್ವಾಮಿಗಳು ಕುಳಿತುಕೊಳ್ಳಲು ಸೂಚಿಸಿದರು. ಕೂರಲು ಅವರಿಗಿಂತ ತಗ್ಗಾದ ಯಾವ ಸ್ಥಾನವೂ ಇಲ್ಲದುದರಿಂದ ಸಂಕೋಚದ ಮುದ್ದೆಯಾಗಿ ಪಕ್ಕದಲ್ಲೇ ಕೂತೆ. "ನಿಮ್ಮನ್ನು ನೋಡಿದ್ದು ತುಂಬಾ ಸಂತೋಷವಾಯಿತು, ನಮ್ಮೂರಿನವರು - ನಿಮ್ಮ ಪರಿಚಯವೇ ಇರಲಿಲ್ಲ, ಆಶ್ಚರ್ಯ" ಎಂದರು ಸ್ವಾಮಿಗಳು. "ಏನು ಕಾಯಕ ಮಾಡಿಕೊಂಡಿದ್ದೀರಿ?" ಎಂದು ಕೇಳಿದರು. ನನ್ನ ಪರಿಚಯ ಹೇಳಿಕೊಂಡೆ.
ಕಾರ್ಯಕ್ರಮ ಆರಂಭವಾಯಿತು, ನಾವು ವೇದಿಕೆಯ ಮೇಲೆ ಹೋದೆವು. ಆ ದಿನದ ಸಮಸ್ಯಾಪೂರಣಕ್ಕೆ ನಾನು ಸ್ರಗ್ಧರಾವೃತ್ತದಲ್ಲಿ "ನಾನೀನೋನೀನೆನಾನೋ ನೆನೆನೆನೆನೆನೆನಾ ನೇನೊನೀನೇನದೇನೋ (ನಾನೀನೋ ನೀನೆನಾನೋ ನೆನೆ ನೆನೆ ನೆನೆ ನಾನೇನೊ ನೀನೇನದೇನೋ)" ಎಂಬ ಸಾಲನ್ನು ರಚಿಸಿ ಸಮಸ್ಯೆಯಾಗಿ ನೀಡಿದೆ. ಪಕ್ಕದಲ್ಲೇ ಸಹಪೃಚ್ಛಕರಾಗಿ ಕುಳಿತಿದ್ದ ಸ್ವಾಮಿಗಳು ತಲೆದೂಗಿ ಭಲಾ ಭಲಾ ಎಂದರು (ಯಥಾಪ್ರಕಾರ, ಮೈಕನ್ನು ಬಾಯೊಳಗೇ ಇಟ್ಟುಕೊಂಡು - ಆ ಅಭ್ಯಾಸವಂತೂ ಮಾಸಿರಲಿಲ್ಲ). ಮುಂದಿನ ನಾಲ್ಕು ಸುತ್ತುಗಳಲ್ಲಿ ಅವಧಾನಿಗಳು ಅದಕ್ಕೊಂದು ಸುಂದರವಾದ ಸಮಸ್ಯಾಪೂರಣಪದ್ಯವನ್ನೂ ರಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಮ್ಮ ಪೂರಣವನ್ನೂ ಹೇಳಬೇಕಲ್ಲ - ನಾನು ಇದೇ ಸಮಸ್ಯೆಗೆ ನನ್ನ ಪರಿಹಾರವನ್ನೂ ರಚಿಸಿ ಹಾಡಿ ತೋರಿಸಿದೆ. ಕಾರ್ಯಕ್ರಮವಾದ ಮೇಲೆ ಇದರ ಬಗ್ಗೆ ಬಹುವಾಗಿ ಮೆಚ್ಚುಗೆ ಸೂಚಿಸಿದ ಸ್ವಾಮಿಗಳು "ನಿಮ್ಮ ಪರಿಚಯ ಇದುವರೆಗೆ ಆಗೇ ಇರಲಿಲ್ಲ ಅನ್ನೋದೇ ದುಃಖದ ವಿಚಾರ, ನೀವು ಚಿಲಕವಾಡಿಗೆ ತಪ್ಪದೇ ಬನ್ನಿ" ಎಂದು ಹೇಳಿ ಬೀಳ್ಕೊಂಡರು. ಅದು ಕೇವಲ ಬಾಯುಪಚಾರದ ಮಾತಾಗಿರಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಕೈತುಂಬ ಸಂಪಾದನೆಯಾಗುವ ವಕೀಲಿಕೆಯನ್ನೂ ತೊರೆದು ನಿಜಗುಣಶಿವಯೋಗಿಗಳ ಗುಹೆಯಲ್ಲಿ ಇರತೊಡಗಿದ ಈ ವಿರಕ್ತಯೋಗಿಯ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು. ಪರಿಚಯದ ಆಮಂತ್ರಣವೂ ಇದ್ದುದರಿಂದ ಸಂಕೋಚವಿಲ್ಲದೇ ತಿಂಗಳೆರಡು ತಿಂಗಳಲ್ಲಿ ಚಿಲಕವಾಡಿಗೆ ಹೊರಟೆ. ನಮ್ಮೂರಿನ ಕಡೆ ಹೋಗೇ ಎಷ್ಟೋ ಕಾಲವಾಗಿಬಿಟ್ಟಿತ್ತು. ಬರುತ್ತೇನೆಂದು ಕರೆಮಾಡಿ ತಿಳಿಸಿದಾಗ ಸ್ವಾಮಿಗಳು ಬಹು ಸಂಭ್ರಮದಿಂದ "ಪ್ರಸಾದಕ್ಕೆ ಇಲ್ಲೇ ಬಂದುಬಿಡಿ" ಎಂದೂ ಹೇಳಿದರು. ದಾರಿಯುದ್ದಕ್ಕೂ ಎರಡುಮೂರು ಬಾರಿ ಕರೆ ಬಂತು. ಹೋಗಿ ಸೇರುವುದು ತಡವಾಯಿತು. ಅವರು ಪ್ರಸಾದ ಸ್ವೀಕರಿಸದೇ ಕಾದು ಕುಳಿತದ್ದು ನೋಡಿ ಬಹಳ ಬೇಸರವಾಯಿತು. ಗುಡ್ಡದ ಕೆಳಗಣ ಮಠದಲ್ಲಿ ಕೂರಿಸಿ ತಾವೇ ಬಡಿಸಿದರು. ಹೊಟ್ಟೆ ತುಂಬಿ ಸಾಕುಬೇಕೆನಿಸುವಂತಾಗಿದ್ದರೂ "ಇಷ್ಟು ಕಡಿಮೆ ಉಂಡರೆ ಹೇಗೆ? ಚಿಕ್ಕವಯಸ್ಸು. ಚೆನ್ನಾಗಿ ಉಣಬೇಕು" ಎಂದು ಬಲವಂತ ಮಾಡಿ ಬಡಿಸಿದರು. ಆನಂತರ ತಾವೂ ಕುಳಿತು ಪ್ರಸಾದ ಸ್ವೀಕರಿಸಿದರು.
ಊಟವಾದನಂತರ ಬೆಟ್ಟದ ತಪ್ಪಲಿನಲ್ಲೇ ತುಸು ಎತ್ತರದಲ್ಲಿದ್ದ ಚಾವಡಿಗೆ ಕರೆದೊಯ್ದರು - ಗುಹೆಯೊಂದಕ್ಕೇ ಸೇರಿದಂತೆ ಕಟ್ಟಿದ್ದ ಕಲ್ಲುಮಂಟಪ, ಸುತ್ತಲೂ ಬಿದಿರಿನ ತಡಿಕೆ. ಇದು ಸ್ವಾಮಿಗಳ ಗ್ರಂಥಾಲಯ, ವ್ಯಾಸಂಗಸ್ಥಳ, ವಿರಾಮಸ್ಥಳ, ಊರ ಹತ್ತುಮಂದಿಯೊಂದಿಗೆ ಬೆರೆತು ಹರಟುವ ಸ್ಥಳ. ನಾನು ಬರುತ್ತೇನೆಂದು ಮೊದಲೇ ತಿಳಿಸಿದ್ದುದರಿಂದ ನನ್ನನ್ನು ಭೇಟಿಮಾಡಲು ಊರಿನ ಐದಾರು ಜನರನ್ನು ಸಹ ಕರೆಸಿದ್ದರು ಸ್ವಾಮಿಗಳು. ಈ ಆದರ, ಉತ್ಸಾಹ, ಸಂಭ್ರಮ - ನನಗೆ ತೀರ ಹೊಸದು. ಅವರಲ್ಲೊಬ್ಬರನ್ನು ನನಗೆ ಪರಿಚಯಿಸಿ "ನಿಮಗೆ ಇವರ ಗುರುತು ಹತ್ತುತ್ತದೆಯೋ ನೋಡಿ" ಎಂದರು. ಎದುರಿದ್ದ ವ್ಯಕ್ತಿ ನನಗೆ ಕೈ ಮುಗಿದು ನಮಸ್ಕಾರ ಹೇಳಿದರು - ನನಗೆ ಗುರುತು ಸಿಕ್ಕಲಿಲ್ಲ. ಸ್ವಾಮಿಗಳೇ ನಗುತ್ತಾ "ಇವರು ನಿಮಗೆ ಚಿಕ್ಕಂದಿನಲ್ಲಿ ಮೇಷ್ಟರಾಗಿದ್ದರು, ಕುಮಾರಾರಾಧ್ಯರು ಅಂತ" ಎಂದು ಪರಿಚಯಿಸಿದರು. ನನಗೆ ಬೆರಗಾಗಿ ಹೋಯಿತು. ಅವರನ್ನು ಮತ್ತೆ ನಿಟ್ಟಿಸಿ ನೋಡಿದರೆ, ಹೌದು, ಅದೇ ಕುಮಾರಾರಾಧ್ಯರು, ನನಗೆ ಮೂರನೆಯ ತರಗತಿಯಲ್ಲಿ ಮೇಷ್ಟರಾಗಿದ್ದವರು. ಮೂವತ್ತೈದು ವರ್ಷಗಳ ಹಿಂದೆ ಆಗಷ್ಟೇ ಕೆಲಸಕ್ಕೆ ಸೇರಿದ್ದ ಚಿಗುರುಮೀಸೆಯ ತೆಳ್ಳಗೆ ಮಡಿಕೋಲಿನಂತಿದ್ದ ಯುವಕನೀಗ, ಆಗಷ್ಟೇ ನಿವೃತ್ತಿಹೊಂದಿದ್ದ ಬೆಳ್ಮೀಸೆಯ ತುಸು ಸ್ಥೂಲಕಾಯವಡೆದ ವೃದ್ಧರಾಗಿದ್ದರು. ಅವರು ನನಗೆ ಮೇಷ್ಟರಾಗಿದ್ದುದು ಒಂದೇ ವರ್ಷ, ಆರಾಧ್ಯ ಮೇಷ್ಟ್ರೆಂದರೆ ನನಗೆ ಥಟ್ಟನೆ ನೆನಪಾಗುವುದು, ಅದೇ ಮೂರನೆಯ ತರಗತಿಯಲ್ಲಿದ್ದಾಗೊಮ್ಮೆ ಅವರು ಮರದ ಪಟ್ಟಿಯಿಂದ ಅಂಗೈಗೆ ಬಾರಿಸಿದ್ದ ಏಟು, ಅದರ ಚುರುಕು, ಬಿಸುಪು ಇನ್ನೂ ಅಂಗೈಯಲ್ಲಿದ್ದಂತೆನಿಸುತ್ತದೆ. ಅದನ್ನೇ ಅವರಿಗೆ ನೆನಪಿಸಿ ನಮಸ್ಕರಿಸಿದೆ. ಅದನ್ನು ನೆನಪಿಸಿದೊಡನೆ ಯಾವಾಗಲೋ ನನಗೆ ಹೊಡೆದದ್ದಕ್ಕೆ ಪಾಪ ಅವರು ಮುಜುಗರಗೊಂಡರೆನಿಸುತ್ತದೆ, ಸಂಕೋಚ ಬೆರೆತ ಮುಗುಳ್ನಗೆಯೊಡನೆ ನಮಸ್ಕಾರವನ್ನು ಸ್ವೀಕರಿಸಿ ಮೇಲೆಬ್ಬಿಸಿದರು. ನಿಜಗುಣಸ್ವಾಮಿಗಳು ನಗುತ್ತಾ "ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸುವಡೆ ಆಗಲಿ ಮಹಾಪ್ರಸಾದವೆಂದೆನಯ್ಯ ಎಂದಿಲ್ಲವೇ, ನೋಡಿ ನಿಮ್ಮ ಶಿಷ್ಯ ಈಗ" ಎಂದರು. ಅದುವರೆಗೆ ಹೊಟ್ಟೆ ತುಂಬಿತ್ತು, ಈಗ ಮನಸ್ಸೂ ತುಂಬಿ ಬಂತು. ಎಲ್ಲಿಯ ಲಾಯರ್ ಬಸವಣ್ಣನವರು, ಎಲ್ಲಿಯ ಚಿಲಕವಾಡಿ ಸ್ವಾಮಿಗಳು, ಎಲ್ಲಿಯ ನನ್ನ ಬಾಲ್ಯ, ಎಲ್ಲಿಯ ನಮ್ಮ ಮೇಷ್ಟರು ಎಲ್ಲಿಯ ನಾನು - ಹೋಗಲಿ ಇವಿಷ್ಟನ್ನು ಇವರು ಪತ್ತೆಹಚ್ಚಿದ್ದಾದರೂ ಹೇಗೆ - ಬುದ್ದಿಯವರ ಪ್ರೀತಿ-ವಾತ್ಸಲ್ಯ-ಆದರ ನಿಜಕ್ಕೂ ಕಣ್ಣಲ್ಲಿ ನೀರು ತರಿಸಿತು. "ಮೊನ್ನೆ ಮೈಸೂರಿನ ಅವಧಾನದಲ್ಲಿ, ಸ್ರಗ್ಧರಾವೃತ್ತದಲ್ಲಿ ಪದ್ಯ ರಚಿಸಿದರು, ಸೊಗಸಾಗಿ ಹಾಡ್ತಾರೆ ಕೂಡ, ನಮ್ಮೂರಿನಾತ ಈತ" ಎಂದು ನೆರೆದಿದ್ದವರಿಗೆ ಹೇಳಿ ಹೇಳಿ, ನನ್ನ ಅದೇ ಪದ್ಯವನ್ನ ಎರಡು ಮೂರು ಬಾರಿ ಹಾಡಿಸಿದರು - ಅದೇ ರಾಗದಲ್ಲಿ, ಬೇರೆಬೇರೆ ರಾಗದಲ್ಲಿ; ಪ್ರತಿಬಾರಿಯೂ ಸಣ್ಣ ಮಕ್ಕಳಂತೆ ಖುಷಿಪಟ್ಟರು.
ಆನಂತರ ಬುದ್ದಿಯವರು ಬೆಟ್ಟದಲ್ಲಿ ಇನ್ನೊಂದು ಸ್ವಲ್ಪ ಮೇಲಿದ್ದ ಮುಪ್ಪಿನ ಷಡಕ್ಷರಿಗಳ ಗುಹೆಗೆ ಕೊಂಡೊಯ್ದರು. ಅದು ಶಿವಯೋಗಿ ಮುಪ್ಪಿನ ಷಡಕ್ಷರಿಗಳು ಇದ್ದ ಸ್ಥಳ, ಬುದ್ಧಿಯವರು ಧ್ಯಾನಾಸಕ್ತರಾಗುವ ಸ್ಥಳ ಕೂಡ. "ಮೊದಲು ಇನ್ನೊಂದು ಸ್ವಲ್ಪ ಮೇಲಿರುವ ನಿಜಗುಣಶಿವಯೋಗಿಗಳ ಗುಹೆಯಲ್ಲಿ ಕೂರುತ್ತಿದ್ದೆ. ಈಗ ಹತ್ತಲು ಕೈಲಾಗೊಲ್ಲ, ಇಲ್ಲಿ ಕೂರುತ್ತೇನೆ" ಎಂದು ಹೇಳಿದ ಬುದ್ಧಿಯವರು, "ನೀವಿಲ್ಲಿ ಸ್ವಲ್ಪ ಹೊತ್ತು ಕಳೆದು, ಮೇಲೆ ನಿಜಗುಣಶಿವಯೋಗಿಗಳ ಗುಹೆಯಲ್ಲೂ ಸ್ವಲ್ಪಹೊತ್ತು ಕೂತಿದ್ದು ಹರಕೆ ಪಡೆದು ಕೆಳಗೆ ಬನ್ನಿ" ಎಂದು ಹೇಳಿ ನನ್ನನ್ನು ಅಲ್ಲೇ ಬಿಟ್ಟು ಕೆಳಗೆ ಹೋದರು. ತುಸು ಹೊತ್ತು ಕುಳಿತೆ. ಈ ಸ್ಥಳದಲ್ಲಿ ಕುಳಿತು ಷಡಕ್ಷರಿ ಯೋಗಿ ಏನೇನು ಚಿಂತಿಸಿರಬಹುದು, ಧೇನಿಸಿರಬಹುದು - ಯಾವಯಾವ ಕಾಣ್ಕೆ ಕಣ್ಣ ಮುಂದೆ ಸುಳಿದಿರಬಹುದು. "ಹೋರಾಟ ಹುಟ್ಟಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ" ಎನ್ನುವಾಗ ದೈವಪಾರಮ್ಯಕ್ಕಾಗಿ ಶತಶತಮಾನಗಳು ನಡೆದ, ನಡೆಯುತ್ತಿರುವ, ನಡೆಯಲಿರುವ ಎಷ್ಟೊಂದು ಹೋರಾಟಗಳು ಅವರ ಕಣ್ಣಮುಂದೆ ಮೆರವಣಿಗೆ ಹೊರಟಿರಬಹುದು! ಕ್ಷಣಕಾಲ ಕುಳಿತು, ಮೇಲಿದ್ದ ನಿಜಗುಣರ ಗುಹೆಗೆ ಹತ್ತಿಕೊಂಡು ಹೋದೆ. ಕೆಲಕಾಲ ಬಳಕೆತಪ್ಪಿದ್ದರಿಂದ ಅಲ್ಲಿ ಹರಡಿದ್ದ ಹಿಕ್ಕೆ, ಗುಹೆಗೆ ಸಹಜವಾದ ಜುಂಗುವಾಸನೆ - ಸಾನ್ನಿಧ್ಯದ ಪಾವಿತ್ರ್ಯಕ್ಕೇನೂ ಭಂಗ ತರಲಿಲ್ಲ. ಅಲ್ಲೊಂದಷ್ಟು ಹೊತ್ತು ತಂಗಿದ್ದೆ; ನಿಜಗುಣಶಿವಯೋಗಿಗಳ ಕೆಲವು ಸ್ವರವಚನಗಳನ್ನು ಕೆಳದನಿಯಲ್ಲಿ ಹಾಡಿಕೊಂಡೆ; ಮನಸ್ಸು ಪ್ರಸನ್ನವಾಯಿತು; ಹರಕೆ ಸಂದಿತೆಂದು ಭಾವಿಸಿ ಕೆಳಗಿಳಿದೆ. ಬಂದವರೆಲ್ಲ ಹೊರಟಿದ್ದರು. ಬುದ್ದಿಯವರು ವಿರಾಮವಾಗಿ ಕುಳಿತು ಬಹುಕಾಲ ಮಾತಾಡಿದರು - ಅವರ ಛಂದಃಪ್ರೀತಿ, ಅದರ ಬಗ್ಗೆ ಅವರು ನಡೆಸಿದ ಅಧ್ಯಯನ, ಸಂಶೋಧನೆಗಳು, ತಮ್ಮ ಪ್ರತಿಭಾವಿಶೇಷದಿಂದ ಅವರೇ ಸೃಷ್ಟಿಸಿದ ಲೆಕ್ಕವಿಲ್ಲದಷ್ಟು ಹೊಸಹೊಸ ಛಂದಸ್ಸುಗಳ ಪರಿಚಯ ಮಾಡಿಸಿದರು. ಛಂದಶ್ಶಾಸ್ತ್ರದ ಬಗೆಗಿರಲಿ, ಛಂದಸ್ಸುಗಳ ಬಗೆಗೇ ಅವರ ಹೊಕ್ಕುಬಳಕೆ ಯಾರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥದ್ದು. ಇಂತಿಂತಹ ಛಂದೋವರ್ಗಗಳಲ್ಲಿ ಇಷ್ಟಿಷ್ಟು ಬಗೆಯ ಗಣಸಂಯೋಜನೆ ಸಾಧ್ಯ, ಅದರಲ್ಲಿ ಇಷ್ಟಿಷ್ಟು ಸಂಯೋಜನೆಗಳನ್ನು ಯಾರೂ ಬಳಸೇ ಇಲ್ಲ, ಅದರಲ್ಲಿ ಈ ಸಂಯೋಜನೆಯನ್ನು ನಾನು ಮಾಡಿದ್ದೇನೆ ನೋಡಿ - ಹೀಗೇ ಸಾಗುತ್ತಿತ್ತು ಬುದ್ದಿಯವರ ವಿವರಣೆ. ಲಕ್ಷಾಂತರ ವೃತ್ತಗಳ ಸಂರಚನೆ ಸಾಧ್ಯವೆನ್ನುತ್ತಾರೆ ಲಾಕ್ಷಣಿಕರು - ನಿಜಗುಣಸ್ವಾಮಿಗಳು ವಿವಿಧ ಮಾತ್ರಾಗಣಗಳನ್ನು ಅಕ್ಷರಗಣಗಳನ್ನು ಚಿತ್ರವಿಚಿತ್ರವಾಗಿ ಸಂಯೋಜಿಸಿ ಅನೇಕ ಹೊಸಹೊಸ ಷಟ್ಪದಿ, ವೃತ್ತಗಳನ್ನು ರೂಪಿಸಿದ್ದಾರೆ. ಉದಾಹರಣೆಗೆ ಶರಷಟ್ಪದಿಗೆ ಸಂವಾದಿಯಾಗಿ ಮಹಾಶರಷಟ್ಪದಿ, ಅನೇಕ ವಿನೂತನವೃತ್ತಗಳು - ನವಯೌವ್ವನ, ಭೂಮೀಶ, ಪಾಂಚಾಲಿ; ಛಂದಸ್ಸಿನ ಸೃಷ್ಟಿಯಷ್ಟೇ ವಿನೂತನವಲ್ಲ, ಅವಕ್ಕಿಟ್ಟ ಹೆಸರುಗಳೂ ವಿನೂತನವೇ - ಉದಾಹರಣೆಗೆ ಏಳುಮಲೆ ಮಾದೇವ ಎಂಬುದೊಂದು ವೃತ್ತ, ನನ್ನಿ, ಕುವೆಂಪು, ಕನ್ನಡಾಂಬೆ, ರಾಮರಾಜ್ಯ - ಮತ್ತೆ ಅವು ಒಂದೊಂದಕ್ಕೂ ಲಕ್ಷಣಪದ್ಯಗಳು ಬೇರೆ. ಕೆಲವು ಛಂದಸ್ಸುಗಳು ಲಯದುಷ್ಕರವೆನಿಸಿದುವು, ಕಟುವೆನಿಸಿದುವು. ಅದನ್ನೇ ಹೇಳಿದೆ - "ಕೆಲವು ವೃತ್ತಗಳಲ್ಲಿ ಲಯಸೌಕರ್ಯವೇ ಇಲ್ಲವಲ್ಲ ಬುದ್ದೀ, ಕೆಲವು ಕಡೆ ಜಗಣವಿರಬಾರದೆಡೆ ಜಗಣವಿದೆ..." ಹೀಗೇ ಏನೋ ಹೇಳಿದ ನೆನಪು. ಕೂಡಲೇ ಸಿಟ್ಟಿಗೆದ್ದ ಬುದ್ಧಿಯವರು - "ಅದೆಲ್ಲಾ ಕಂದಾಚಾರ. ಯಾವುದು ಲಯಸೌಕರ್ಯ? ಹಾಡ್ತಾ ಹಾಡ್ತಾ ರಾಗ. ಹಾಡೋಕ್ಕೆ ಬರಬೇಕಷ್ಟೇ; ಈಗ ವೆಂಕಟಮಖಿ 72 ಮೇಳಕರ್ತ ಮಾಡಿದಾನಲ್ಲ, ಅದನ್ನೆಲ್ಲಾ ಹಾಡೋಕ್ಕೆ ಆಗುವುದೋ? ಅದು ಪ್ರತಿಭಾಸೃಷ್ಟಿಯಷ್ಟೇ, ದಕ್ಕಿಸಿಕೊಳ್ಳುವವರು ದಕ್ಕಿಸಿಕೊಳ್ಳುತ್ತಾರೆ" ಎಂದರು "ನಿನಗೆ ಯೋಗ್ಯತೆಯಿದ್ದರೆ ದಕ್ಕಿಸಿಕೋ ಇಲ್ಲದಿದ್ದರೆ ತೆಪ್ಪಗಿರು" ಎಂಬ ಧ್ವನಿಯನ್ನು ಅದರಲ್ಲಿ ಗುರುತಿಸಿ, ಅರಿತು ಕೈಮುಗಿದು ಸುಮ್ಮನಾದೆ. ಮಾತು ವಚನಸಾಹಿತ್ಯಕ್ಕೆ, ಅನುಭಾವಕ್ಕೆ, ಶರಣಸತಿ-ಲಿಂಗಪತಿ ಪರಿಕಲ್ಪನೆಗೆ ಹೊರಳಿತು. ಈ ಪರಿಕಲ್ಪನೆಯ ಕೆಲವು ವಚನಗಳನ್ನು ಬುದ್ದಿಯವರು ಭಾವಪೂರ್ಣವಾಗಿ, ಅಭಿನಯಪೂರ್ವಕವಾಗಿ ಅಂದು ತೋರಿಸಿದರು. ಅವರು ಹೀಗೆ 'ಅನ್ನು'ವ ಶೈಲಿಯೇ ಅನನ್ಯ. ಕೇಳುತ್ತ ಕೇಳುತ್ತಾ ಹೊತ್ತು ಸರಿಯಿತು, ಸಂಜೆಯಾಗತೊಡಗಿತು. ಬನ್ನಿ ಕೆಳಗೆ ನಿಜಗುಣಾನುಭವಮಂಟಪವನ್ನು ನೋಡಿಕೊಂಡು ಹೊರಡುವಿರಂತೆ ಎಂದು ಕೆಳಗೆ ಕರೆದುಕೊಂಡುಬಂದರು. ವಿಶಾಲವಾದ ಪ್ರಾಂಗಣ, ನಿಜಗುಣಶಿವಯೋಗಿಗಳ ದೊಡ್ಡ ಚಿತ್ರಪಟ, ಕಟ್ಟಡದ ಸುತ್ತ ಆಪ್ತವೆನಿಸುವ ಕೈತೋಟ. ಸುತ್ತುಹಾಕಿಕೊಂಡು ಒಳಬಂದು ಕುಳಿತೆವು. ಇಲ್ಲಿ ಆಗೀಗ ಭಜನೆ, ಕೆಲವು ಕಾರ್ಯಕ್ರಮಗಳು ನಡೆಯುತ್ತವೆ, ನಿರೀಕ್ಷಿಸಿದಷ್ಟು ಉತ್ಸಾಹ ಕಾಣುತ್ತಿಲ್ಲ ಎಂದು ಹೇಳುವಾಗ ಬುದ್ದಿಯವರ ಮುಖ ಸಪ್ಪಗಾಯಿತು. ಯಾವುದೋ ಲೋಕದಲ್ಲಿದ್ದವರಂತೆ ತೇಲುಗಣ್ಣಾಗಿ ಹೇಳಿದರು - "ನಾನು, ಕೈವಲ್ಯಸಾಧನೆಯಲ್ಲಿ ಬಹಳಷ್ಟು ದೂರ ಕ್ರಮಿಸಿಬಿಟ್ಟಿದ್ದೆ, ಬಹಳ ಮೇಲೆ ತಲುಪಿದ್ದೆ, ಗುರಿಗೆ ಬಹಳ ಹತ್ತಿರವಿದ್ದೆ..." ಕೆಲಕಾಲ ನಿಲ್ಲಿಸಿ ಮತ್ತೆ ನಿಧಾನಕ್ಕೆ ನುಡಿದರು "ಈ ಅನುಭವಮಂಟಪ ಕಟ್ಟುವ ಹವ್ಯಾಸದಲ್ಲಿ ಮತ್ತೆ ಭವಕ್ಕೆ ಬಿದ್ದೆ..." ಬುದ್ದಿಯವರ ಕಣ್ಣು ತೇವವಾಗಿದ್ದು ಸ್ಪಷ್ಟವಾಗಿತ್ತು. ಅದನ್ನವರು ತೊಡೆಯುವ ಪ್ರಯತ್ನವನ್ನೇನೂ ಮಾಡಲಿಲ್ಲ. ಕೆಲಕಾಲದ ಮೌನದನಂತರ ಇಹಕ್ಕೆ ಮರಳಿದವರೇ, ತಟಕ್ಕನೆ ಏಳುತ್ತಾ, "ನಿಮಗೆ ಹೊತ್ತಾಯಿತು, ಹೊರಟುಬಿಡಿ, ಆಗಾಗ ಬರುತ್ತಿರಿ" ಎಂದರು.
ನಾನೂ ಕತ್ತಲಲ್ಲಿ ಐವತ್ತು ಕಿಲೋಮೀಟರು ಟೂವ್ಹೀಲರ್ ಓಡಿಸಿಕೊಂಡು ನನ್ನ 'ಭವ'ಕ್ಕೆ ಸುರಕ್ಷಿತವಾಗಿ ಮರಳಬೇಕಿತ್ತು. ಅವರವರ ಭವ ಅವರವರಿಗೆ ದೊಡ್ಡದು ಎನ್ನುವ ಭಾವ ಹೊತ್ತು ಮರಳಿದೆ.
ಆಮೇಲೆ ಬುದ್ದಿಯವರನ್ನು ಒಂದೆರಡು ಬಾರಿ ದೂರವಾಣಿಯಲ್ಲಿ ಮಾತಾಡಿಸಿದ್ದಷ್ಟೇ. ಕೆಲವರ್ಷಗಳ ಮೇಲೆ ಒಂದುಬಾರಿ ಇದ್ದಕ್ಕಿದ್ದಂತೆ ಬೆಳಗಿನ ಏಳುಗಂಟೆಗೆ ಕರೆಮಾಡಿ, ನಿಮ್ಮ ಮನೆಯ ಹತ್ತಿರದ ಸರ್ಕಲಿನಲ್ಲಿದ್ದೇನೆ, ನಿಮ್ಮ ಮನೆಗೆ ಹೇಗೆ ಬರಬೇಕೆಂದು ತಿಳಿಸಿ ಎಂದಿದ್ದರು. ನಮ್ಮಲ್ಲೋ, ಸ್ವಾಮಿಗಳು ಮನೆಗೆ ಬರುವುದೆಂದರೆ ಸಾಮಾನ್ಯವಲ್ಲ, ಅದರ ಪರಿಠವಣೆಯೇ ಬೇರೆ. ನೋಡಿದರೆ ಈತ ಮನೆಯ ಹತ್ತಿರವೇ ನಿಂತುಕೊಂಡು ದಾರಿ ಕೇಳುತ್ತಿದ್ದಾರೆ. ಅರ್ಧ ಮನೆ ಇನ್ನೂ ಹಾಸಿಗೆ ಬಿಟ್ಟು ಎದ್ದೂ ಇಲ್ಲ. ಮನೆಯಲ್ಲಿ ದೊಡ್ಡ ಗಡಿಬಿಡಿಯೆದ್ದಿತು. ಅದೇ ಗಡಿಬಿಡಿಯಲ್ಲಿ ಮುಖ ಗಲಬರಿಸಿಕೊಂಡು, ಅಂಗಿಯೇರಿಸಿಕೊಂಡು ಓಡಿದೆ. ಹೋಗಿ ಮನೆಗೆ ಕರೆದುಕೊಂಡು ಬಂದೆ. "ಸ್ವಾಮಿಗಳು" ಮನೆಗೆ ಬಂದಹಾಗಾಗಲೇ ಇಲ್ಲ. ಬುದ್ದಿಯವರು ಬಂದು ಸ್ವಲ್ಪಹೊತ್ತು ಕುಳಿತಿದ್ದು, ಎಲ್ಲರನ್ನೂ ಮಂದಹಾಸದೊಡನೆ ಮಾತಾಡಿಸಿ, ಮಗನ ತಲೆ ಸವರಿ, ತಮ್ಮನ ಬೆನ್ನು ತಟ್ಟಿ, ಒಂದು ಲೋಟ ಹಾಲು ಕುಡಿದು ಹೊರಟರು. "ನನ್ನನ್ನು ಇಲ್ಲೇ ಸರ್ಪಭೂಷಣಮಠಕ್ಕೆ ಬಿಟ್ಟುಬಿಡಿ ಸಾಕು" ಎಂದು ನನ್ನ ಟೂವ್ಹೀಲರಿನಲ್ಲೇ ಕುಳಿತು ಡ್ರಾಪ್ ಪಡೆದರು.
ಆಮೇಲೆ ಅವರನ್ನು ಹಲವು ಬಾರಿ ನೆನೆದಿದ್ದೇನೆ; ಈ ಐದಾರು ತಿಂಗಳಲ್ಲಂತೂ ಅದೇಕೋ, ಮಿತ್ರರೊಡನೆ ಮಾತುಕತೆಗಳಲ್ಲಿ ಅವರ ವಿಷಯ ಸಾಕಷ್ಟು ಬಾರಿ ಬಂದು ಹೋಗಿದೆ. ಮನಸ್ಸು ವಿಹ್ವಲಗೊಂಡಾಗಲೆಲ್ಲಾ ತಣ್ಣಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ ಇದ್ದುಬಿಡುವುದೆಂಬ ಕಲ್ಪನಾಸಮಾಧಾನವನ್ನು ಅನೇಕ ಬಾರಿ ಮನಸ್ಸಿಗೆ ತಂದುಕೊಂಡಿದ್ದೇನೆ. ಹಾಗೆಂದುಕೊಂಡಾಗಲೆಲ್ಲಾ, ದೂರದಲ್ಲಿರುವ ಮಿನುಗುದೀವೊಂದು ನಾವು ಯಾತಕ್ಕೂ ಉಪಯೋಗಿಸದಿದ್ದರೂ ತನ್ನ ಮಿನುಗುವಿಕೆಯಿಂದಲೇ ಒಂದು ಬಗೆಯ ಭರವಸೆ ತುಂಬುವಂತೆ ಭರವಸೆ ತುಂಬಿ ಬಂದಿದೆ. ಅನೇಕ ಬಾರಿ ಅಲ್ಲಿ ಹೋಗಿ ಒಂದೆರಡು ಗಂಟೆಯಾದರೂ ಅವರೊಡನೆ ಕಾಲಕಳೆದು ಬರಬೇಕೆಂದುಕೊಂಡಿದ್ದೇನೆ. ಆದರೆ ಯಾವತ್ತೂ ಅದು ಸಾಧ್ಯವಾಗಲೇ ಇಲ್ಲ. ಈಗ್ಗೆ ಕೆಲತಿಂಗಳ ಹಿಂದೆ ಕುಮಾರನಿಜಗುಣರಿಗೆ ಬಹಳ ಹುಷಾರಿಲ್ಲ, ಬೆಂಗಳೂರಿನಲ್ಲಿದ್ದಾರೆ ಎಂಬ ಸುದ್ದಿ ಬಂತು. ಅಂದುಕೊಂಡಂತೆ ಮೊದಲೇ ಒಮ್ಮೆ ಚಿಲಕವಾಡಿಗೆ ಹೋಗಿ ನೋಡಿ ಬರಲಾಗದ್ದಕ್ಕೆ ವಿಷಾದವಾಯಿತು. ಈಗ ಅವರು ನಮ್ಮನ್ನಗಲಿದನಂತರ, ಆ ವಿಷಾದ ಶಾಶ್ವತವಾಗಿ ಉಳಿದುಕೊಂಡಿತು.
ಅಗಲಿದ ಹಿರಿಯರಿಗೆ, ಅವರೊಪ್ಪುವಂತೆ ಒಂದು ಶ್ರದ್ಧಾಂಜಲಿಯನ್ನಾದರೂ ಸಲ್ಲಿಸುವುದು ನಮಗುಳಿದ ಕಾರ್ಯ. ಅವರೇ ಸೃಷ್ಟಿಸಿದ "ಏಳುಮಲೆ ಮಾದೇವ" ವೃತ್ತದಲ್ಲಿ ಅವರಿಗಾಗಿ ಈ ಶ್ರದ್ಧಾಂಜಲಿ (ಏಳುಮಲೆ ಮಾದೇವ ವೃತ್ತ - ಭಯಜಸ ರನತ ಗಣಗಳು ಮತ್ತೊಂದು ಗುರು - ಒಟ್ಟು 22 ಅಕ್ಷರಗಳು - "ಏಳುಮಲೆ ಮಾದೇವ ಏಳುಮಲೆ ಮಾದೇವ ಏಳುಮಲೆ ಮಾದೇವನೇ" - ಹೀಗೆ):
ವೃತ್ತಗಳ ಸುತ್ತುತ್ತೆ ಕಂದಗಳ ತಾನೆತ್ತುತುಂ ಸಲಹಿ ಸಂತೈಸುತುಂ
ಚಿತ್ತದೊಳಗೆತ್ತಿರ್ದ ಶಂಭುವಿನ ರೂಹೆತ್ತಲುಂ ಕದಲದಂತಾವಗಂ
ಸುತ್ತರಿದು ಕಾಯುತ್ತಲಿತ್ತ ಶಿವಯೋಗಂಗಳೊಳ್ಮುಳುಗುತುಂ ಸೌಖ್ಯಮಂ
ಪೊತ್ತ ಮೃದುಮಂದಸ್ಮಿತಂ ನಿಜಗುಣಾಖ್ಯ ಶಿವಯೋಗಿಕುವರಂಗೊಂದಿಪೆಂ
ಈ ಲೇಖನ ಬ್ಲಾಗ್ ನಲ್ಲೂ ಲಭ್ಯ:
http://nannabaraha.blogspot.com/2021/07/blog-post_22.html
Manjunatha Kollegala
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ